520 ಕುಟುಂಬಗಳಿಗೆ ಆಹಾರ ಕಿಟ್ | ಸುಮಾರು ರೂ.4 ಲಕ್ಷ ವೆಚ್ಚ | ದಾನಿಗಳ ನೆರವು

ಪುತ್ತೂರು , June 20, 2021 : ಕೊರೋನಾ ಒಂದನೇ ಅಲೆಯಲ್ಲಿಯೇ ಮಾನವ ತತ್ತರಿಸಿ ಹೋಗಿದ್ದಾನೆ. ಇದೀಗ ಕೊರೋನಾ ಎರಡನೇ ಅಲೆಯು ಮಾನವನ ಜೀವನದಲ್ಲಿ ಮರಣಮೃದಂಗ ಬಾರಿಸುತ್ತಿದ್ದು ರಾಜ್ಯ-ರಾಜ್ಯಕ್ಕೆ, ಜಿಲ್ಲೆ-ಜಿಲ್ಲೆಯು ಲಾಕ್‍ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅತ್ತ ಕೆಲಸವಿಲ್ಲ, ಇತ್ತ ಹಣವಿಲ್ಲ ಎಂಬಂತೆ ಈ ಲಾಕ್‍ಡೌನ್ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದಲ್ಲಿ ನಿಜವಾಗಿಯೂ ಆತಂಕ ಸೃಷ್ಟಿಸಿರುವುದು ನಿಜ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಲ್ಲಿನ ಚರ್ಚ್‍ನ ಧರ್ಮಗುರುಗಳು, ಚರ್ಚ್ ಪಾಲನಾ ಸಮಿತಿಯು ಚರ್ಚ್ ವ್ಯಾಪ್ತಿಯ ಎಲ್ಲರಿಗೂ ಆಹಾರ ಸಾಮಾಗ್ರಿಗಳ ಕಿಟ್ ಒದಗಿಸಿ ಫಲಾನುಭವಿಗಳ ಪಾಲಿಗೆ ಸಂಜೀವಿನಿಯಾಗಿರುವುದು ನಿಜಕ್ಕೂ ಶಹಬ್ಬಾಷ್ ಎನಿಸಿದೆ.

ಹೌದು, ಇದು ನಡೆದದ್ದು ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್‍ನಲ್ಲಿ. ಮಾಯಿದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಹಾಗೂ ಸಮಿತಿಯು ದ್ವಿತೀಯ ಬಾರಿಗೆ ಚರ್ಚ್ ವ್ಯಾಪ್ತಿಯ ಸುಮಾರು 673 ಕುಟುಂಬಗಳಿಗೂ ಸಣ್ಣ `ಕಾಣಿಕೆ' ಎಂಬಂತೆ ಆಹಾರ ಸಾಮಾಗ್ರಿಗಳ ಕಿಟ್ ಒದಗಿಸಬೇಕು ಎನ್ನುವ ಚಿಂತನೆಗೆ ಸಾಥ್ ನೀಡಿದ್ದು ಹೃದಯವಂತ ದಾನಿಗಳು. ಸುಮಾರು 103 ಅರ್ಹ ಬಡ ಕುಟುಂಬಗಳಿಗೆ ಸುಮಾರು ರೂ.60 ಸಾವಿರ ವೆಚ್ಚದಲ್ಲಿ ಆಹಾರ ಸಾಮಾಗ್ರಿಗಳ ಕಿಟ್‍ನ್ನು ಚರ್ಚ್ ಪ್ರಥಮ ಹಂತದಲ್ಲಿ ಒದಗಿಸಿ ಶ್ಲಾಘನೆಗೆ ಪಾತ್ರವಾಗಿತ್ತು.

ಸುಮಾರು ರೂ.4 ಲಕ್ಷ ವೆಚ್ಚ:

ಎಲ್ಲರಿಗೂ ಕಿಟ್ ನೀಡುತ್ತೇವೆ, ಯಾರಿಗೆ ಬೇಡ ಅವರುಗಳು ಮುಂಚಿತವಾಗಿ ತಿಳಿಸತಕ್ಕದ್ದು ಎಂಬ ಮುನ್ಸೂಚನೆಯೊಂದಿಗೆ ಚರ್ಚ್ ಧರ್ಮಗುರುಗಳು ಹಾಗೂ ಪಾಲನಾ ಸಮಿತಿ ಕಾರ್ಯೋನ್ಮುಖರಾಗಿದ್ದು ಮಾತ್ರವಲ್ಲದೆ ಚರ್ಚ್ ವ್ಯಾಪ್ತಿಯಲ್ಲಿ ಸರ್ವತ್ರ ಪ್ರಶಂಸೆಗೆ ಒಳಗಾಗಿದೆ. ಅಕ್ಕಿ ಒಳಗೊಂಡ ನಿತ್ಯ ಆಹಾರ ಸಾಮಾಗ್ರಿಗಳ ಸುಮಾರು 20 ಬಗೆಯ ಕಿಟ್‍ನ್ನು ಈಗಾಗಲೇ ಯಶಸ್ವಿಯಾಗಿ ಹಂಚಿಕೆಯಾಗಿದೆ. ಚರ್ಚ್ ವ್ಯಾಪ್ತಿಯ 19 ವಾಳೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಗಂಟೆ ಒಂಭತ್ತರ ಬಳಿಕ ರಾಜ್ಯ ಸರಕಾರವು ಲಾಕ್‍ಡೌನ್ ವಿಧಿಸಿದ್ದರಿಂದ ಬೆಳಿಗ್ಗೆ 8 ರಿಂದ 9 ಗಂಟೆಯೊಳಗಡೆ ಆಯಾ ವಾಳೆಗಳ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸುವ ಕೆಲಸವನ್ನು ಜೂನ್ 15 ರಿಂದ 17ರ ವರೆಗೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾಡಲಾಗಿತ್ತು. ದಾನಿಗಳ ನೆರವಿನೊಂದಿಗೆ ಸುಮಾರು ರೂ.4 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ 520 ಕುಟುಂಬಗಳಿಗೆ ಕಿಟ್ ಅನ್ನು ಯಶಸ್ವಿಯಾಗಿ ವಿತರಿಸಲಾಗಿತ್ತು. ಇದರಲ್ಲಿ ಚರ್ಚ್ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಕನಿಷ್ಟ ವೇತನ ಪಡೆಯುವ ಶಿಕ್ಷಕರಿಗೆ, ಆಡಳಿತ ಸಿಬ್ಬಂದಿಯವರಿಗೂ ಕಿಟ್ ಅನ್ನು ವಿತರಿಸಲಾಗಿತ್ತು.

ಸಿಎಲ್‍ಸಿ ನೇತೃತ್ವದಲ್ಲಿ ಜೋಡಣಾ ಕಾರ್ಯ:

ಚರ್ಚ್‍ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರ ಮುಂದಾಳತ್ವದಲ್ಲಿ ಆಹಾರ ಸಾಮಾಗ್ರಿಗಳನ್ನು ಸಮರ್ಪಕವಾಗಿ ಜೋಡಿಸುವ ಕಾರ್ಯವನ್ನು ಚರ್ಚ್ ಆಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‍ಸಿ) ಸಂಸ್ಥೆಗೆ ನಿರ್ವಹಿಸಲಾಗಿತ್ತು. ಅದರಂತೆ ಸಿಎಲ್‍ಸಿ ಸಂಸ್ಥೆಯ ನೇತೃತ್ವದಲ್ಲಿ ಸಿಎಲ್‍ಸಿ ಸಂಸ್ಥೆ ಸೇರಿದಂತೆ ಚರ್ಚ್‍ನ ಇತರ ಸಂಸ್ಥೆಗಳಾದ ಡೊನ್ ಬೊಸ್ಕೊ ಕ್ಲಬ್, ಐಸಿವೈಎಂ, ಸಂತ ವಿನ್ಸೆಂಟ್ ದೇ ಪಾವ್ಲ್, ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಲೀಜನ್ ಆಫ್ ಮೇರಿ, ಕ್ರಿಸ್ಟೋಫರ್ ಅಸೋಸಿಯೇಶನ್, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು ಆಹಾರ ಸಾಮಾಗ್ರಿಗಳ ಕಿಟ್‍ನ ಜೋಡಣಾ ಕಾರ್ಯದಲ್ಲಿ ಕೈಜೋಡಿಸಿದ್ದರು.

ದೂರದ ವಾಳೆಗಳಿಗೆ ಅಲ್ಲಿಯೇ ಹಂಚಿಕೆ:

ಚರ್ಚ್ ವ್ಯಾಪ್ತಿಯ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ವಾಳೆಗಳಾದ ಸಂಟ್ಯಾರು, ಗುಂಡ್ಯಡ್ಕ, ಪದವು, ಬಲ್ನಾಡು, ಶಿಂಗಾಣಿ, ಮಿತ್ತೂರು ವಾಳೆಗಳಲ್ಲಿ ಆಯಾ ವಾಳೆಗಳ ಗುರಿಕಾರರು ಹಾಗೂ ಪ್ರತಿನಿಧಿಗಳ ನೆರವಿನಲ್ಲಿ ಅವರುಗಳ ವಾಳೆಗಳಲ್ಲಿಯೇ ಆಹಾರ ಸಾಮಾಗ್ರಿಗಳ ಹಂಚಿಕೆಯ ಕಾರ್ಯವನ್ನು ಮಾಡಲಾಗಿತ್ತು. ವಾಳೆಗಳಲ್ಲಿ ಯಾರು ಆರೋಗ್ಯವನ್ನು ಹೊಂದದವರು, ವಯೋವೃದ್ಧರು ಇವರುಗಳಿಗೆ ಆಹಾರ ಕಿಟ್‍ನ್ನು ಕೊಂಡೊಯ್ಯಲು ಅಸಾಧ್ಯವಾದರೆ ಅವರುಗಳು ಆಯಾ ವಾಳೆಗಳ ಗುರಿಕಾರರಿಗೆ ತಿಳಿಸಿದರೆ ಅಂಥವರಿಗೆ ಖುದ್ದಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

'ಬಾಕ್ಸ್ ಕಿಟ್ ಸಣ್ಣ ಕಾಣಿಕೆ' ಎಂದು ಪರಿಗಣಿಸಿ ಸ್ವೀಕರಿಸಿ...

"ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಅನೇಕರು ವಿವಿಧ ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಲವಾರು ಮಂದಿಗೆ ಕೋವಿಡ್ ಪಾಸಿಟಿವ್ ಬಂದ್ರೂ ದೇವರು ಗುಣಪಡಿಸಿದ್ದಾರೆ. ಯಾರು ಕೊರೋನಾದಿಂದ ಬಳಲುತ್ತಿದ್ದಾರೋ ಅವರುಗಳಿಗೆ ದೇವರು ಉತ್ತಮ ಆರೋಗ್ಯವನ್ನು ಕೊಡಲಿ. ಕೊರೋನಾ ಲಾಕ್‍ಡೌನ್‍ನಿಂದ ಇದೀಗ ಎರಡು ತಿಂಗಳುಗಳೇ ಆಗುತ್ತಿದೆ. ವ್ಯವಹಾರದ ಅಡಚಣೆಯಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಹಿನ್ನೆಡೆಯನ್ನು ಅನುಭವಿಸುತ್ತಿದೆ. ಚರ್ಚ್ ಪ್ರಥಮ ಹಂತದಲ್ಲಿ ಸುಮಾರು 105 ಕುಟುಂಬಗಳಿಗೆ, ಸಿಎಲ್‍ಸಿ ಸಂಸ್ಥೆಯು 70 ಕುಟುಂಬಗಳಿಗೆ ಆಹಾರ ಕಿಟ್‍ನ್ನು ವಿತರಿಸಲಾಗಿತ್ತು. ಇದೀಗ ಮಧ್ಯಮ ವರ್ಗದ ಕುಟುಂಬಗಳೂ ಕೂಡ ಸಂಕಷ್ಟವನ್ನು ಎದುರಿಸುತ್ತಿದ್ದು, ಎಲ್ಲರಿಗೂ ಆಹಾರ ಕಿಟ್‍ನ್ನು ಒದಗಿಸುವ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದೇವೆ. ಪ್ರತೀ ಕುಟುಂಬಗಳು ಇದೊಂದು `ಸಣ್ಣ ಕಾಣಿಕೆ' ಎಂದು ಪರಿಗಣಿಸಿ ಸ್ವೀಕರಿಸಬೇಕು".
-ವಂ| ಲಾರೆನ್ಸ್ ಮಸ್ಕರೇನ್ಹಸ್, ಪ್ರಧಾನ ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್

ವರದಿ : ಸಂತೋಷ್ ಮೊರಾಸ್, ಪುತ್ತೂರು

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: 2440524; 2440525; 8277937782

E-Mail: [email protected]