ಯೇಸುಕ್ರಿಸ್ತರು ದೇವ ಪುತ್ರರು; ಧರೆಗಿಳಿದು ಬಂದು, ಮನುಷ್ಯನಾಗಿ ಜನಿಸಿದರು. ಅವರು ನಮ್ಮಂತೆಯೇ ಇದ್ದುಕೊಂಡು, ಎಲ್ಲಾ ವಿಷಯಗಳಲ್ಲೂ ಶೋಧನೆ, ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ನಾವು ಸತ್‍ಜೀವ ಪಡೆಯಲು, ದೇವರು ತಮ್ಮ ಏಕೈಕ ಪುತ್ರನನ್ನು ನಮಗಾಗಿ ದಾರೆಯೆರೆದು ಕೊಟ್ಟಿದ್ದಾರೆ. ಸತ್ಯನೀತಿಯ ಮಾರ್ಗದಲ್ಲಿ ನಡೆದವರಿಗೆ ಕಷ್ಟ ಮತ್ತು ಕಿರುಕುಳ ಕಟ್ಟಿಟ್ಟ ಬುತ್ತಿ. ಕತ್ತಲಿನಲ್ಲಿ ನಡೆಯಲು ಇಚ್ಚಿಸುವ ಜನರಿಗೆ ಬೆಳಕಿನಲ್ಲಿ ನಡೆಯುವವರ ಬಗ್ಗೆ ಅಸೂಹೆ ಹಾಗೂ ದ್ವೇಷ ಉಕ್ಕಿಬರುತ್ತದೆ. ಅಂತಹ ದ್ವೇಷಕ್ಕೆ ಗುರಿಯಾಗಿ ಯೇಸುಸ್ವಾಮಿಯವರು ಶಿಲುಬೆಯ ಮೇಲಿನ ಘೋರ ಮರಣಕ್ಕೆ ಬಲಿಯಾದರು.

ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂದಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಭಾನುವಾರ ಮುಂಜಾನೆ ಅವರ ಪಾರ್ಥಿವ ಶರೀರವಿಟ್ಟ ಸಮಾದಿಯ ಕಲ್ಲು ತೆಗೆಯಲ್ಪಟ್ಟಿದ್ದು ದೇವದೂತರು ನಡೆದ ಘಟನೆಯನ್ನು ಮಾಗ್ದಲದ ಮರಿಯಳಿಗೆ ವಿವರಿಸಿ ಹೇಳಿದರು. ಅಷ್ಟರಲ್ಲಿ ಯೇಸುವೇ ಅವಳಿಗೆ ತಮ್ಮ ದರ್ಶನ ನೀಡಿ, ತಾನು ಜೀವಂತನಾಗಿದ್ದೇನೆ ಎಂದು ತೋರಿಸಿದರು. ಹನ್ನೊಂದು ಮಂದಿ ಶಿಷ್ಯರಿಗೂ ತಮ್ಮ ದರ್ಶನವನ್ನು ನೀಡಿದ ಯೇಸು, ಮೊಳೆಗಳನ್ನು ಜಡಿದ ತನ್ನ ಕೈಗಳನ್ನೂ, ಈಟಿಯಿಂದ ತಿವಿಯಲ್ಪಟ್ಟ ತನ್ನ ಪಕ್ಕೆಯನ್ನೂ ತೋರಿಸಿದರು; ಮಾತ್ರವಲ್ಲದೆ ಅವರು ಶಿಷ್ಯರ ಮೇಲೆ ಪವಿತ್ರಾತ್ಮರ ವರವನ್ನೂ ಕೊಟ್ಟು ಹೀಗೆಂದರು: "ಪವಿತ್ರಾತ್ಮರನ್ನು ಸ್ವೀಕರಿಸಿ, ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು" ಎಂದು ನುಡಿದರು.

ಯೇಸುಕ್ರಿಸ್ತರು ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿ, ಅವರ ಮೇಲೆ ಯಾರು ವಿಶ್ವಾಸವಿಡುತ್ತಾರೋ ಅವರಿಗೂ ಪುನರುತ್ಥಾನದ ವರ ದೊರಕುವುದು ಎಂದು ಆಶ್ವಾಸನೆಯನ್ನು ನೀಡಿದ್ದಾರೆ. ಯೇಸುವಿನಲ್ಲಿ ವಿಶ್ವಾಸವಿಟ್ಟಲ್ಲಿ ನಾವು ನಿತ್ಯಕಾಲವು ದೇವರೊಡನೆ ಜೀವಿಸುವೆವು. ಈ ನಮ್ಮ ಶರೀರವು ಹೊಸತನವನ್ನು ಹೊಂದಿ, ನಾವು ಸತ್ತರೂ, ಪುನಃ ಎದ್ದು ಬಂದು ನಿರಂತರವಾಗಿ ದೇವಸ್ವರೂಪಿಯಾಗಿ ದೇವರೊಡನೆ ಬಾಳುವೆವು. ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಿತ್ಯ ಜೀವವನ್ನು ಪಡೆಯಲು ಯೋಗ್ಯರಾಗುವೆವು. ಅನ್ಯಾಯವನ್ನು ಸಹಿಸಿ, ಬಳಲಿ ಬೆಂಡಾದವರಿಗೆ ಪುನರುತ್ಥಾನದಲ್ಲಿ ನ್ಯಾಯ ದೊರಕುವುದು. ಪುನರುತ್ಥಾನವಿಲ್ಲದಿದ್ದಲ್ಲಿ ನಾವು ಸಹಿಸಿದ ಕಷ್ಟಗಳಿಗೆ, ನೀತಿಗಾಗಿ ಪಟ್ಟ ಬವಣೆಗಳಿಗೆ ಏನೂ ಪ್ರತಿಫಲವಿಲ್ಲದಂತಾಗುತ್ತದೆ.

ದೇವರು ನಮಗೆ ನೀಡಿದ ಪುನರುಜ್ಜೀವನದ ಆಶ್ವಾಸನೆಯು ಹೇಗೆ ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆಯೋ, ಅದೇ ರೀತಿ ವಸಂತ ಋತುವಿನಲ್ಲಿ ಉದುರುವ ಪ್ರತಿಯೊಂದು ಎಲೆಯಲ್ಲೂ ಸಾಕ್ಷತ್ಕರಿಸಲ್ಪಟ್ಟಂತೆ ತೊರುತ್ತದೆ. ಏಕೆಂದರೆ ಈ ಋತುವಿನಲ್ಲಿ ಉದುರುವ ಪ್ರತಿಯೊಂದು ಎಲೆಯೂ ಮುಂದೆ ಬರಲಿರುವ ಚಿಗುರಿನ ಸೂಚನೆಯಾಗಿದೆ. ವಸಂತ ಋತುವಿನ ಕಾಲದಲ್ಲಿ ಬರುವ ಪುನರುಜ್ಜೀವನದ ದ್ಯೋತಕವಾದ ಈಸ್ಟರ್ ಹಬ್ಬವು, ನಮ್ಮ ಪ್ರತಿಯೊಬ್ಬರ ಪುನರುಜ್ಜೀವನಕ್ಕೂ ನಾಂದಿಯಾಗಿದೆ.

ಬಲಾಡ್ಯವಾದ ಮೃತ್ಯುವಿಗಿಂತ ಜೀವನವೇ ಬಲಿಷ್ಟವಾದುದು.
ಘೋರವಾದ ಕತ್ತಲೆಗಿಂತ ಬೆಳಕೇ ಶ್ರೇಷ್ಟವಾದುದು.
ಆತ್ಮಸಾಕ್ಷಿಯನ್ನು ವಂಚಿಸುವ ತಪ್ಪಿಗಿಂತ,
ಮನಸ್ಸನ್ನು ನಿರಾಳಗೊಳಿಸುವ ನೈಜತೆಯ ಸತ್ಯವು ಮಿಗಿಲಾದುದು
ಎಂಬುದನ್ನು ದೃಡಪಡಿಸಲು ಯೇಸು ನಮಗೆ ನೀಡಿದ
ನಂಬುಗೆ ಮತ್ತು ಭರವಸೆಯ ವಿಜಯೋತ್ಸವವೇ ಈಸ್ಡರ್- ಪಾಸ್ಖ ಹಬ್ಬ

ತಮಗೆಲ್ಲರಿಗೂ ಈಸ್ಟರ್ ಹಬ್ಬದ ಶುಭಾಷಯಗಳು.

ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ
ಧರ್ಮಾದ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ.

 

Comments powered by CComment

Home | AboutNews | Contact | Sitemap

Copyright ©2014 www.dioceseofmangalore.com. Powered by eCreators

Contact Us

Bishop's House,
Kodialbail,
Mangalore - 575 003
Phone: +91 824 2440524 (4 lines) 2447933, 2420517
Fax 91-824-2444035

E-Mail: [email protected]